The PPST Group
Celebrating the Birth Centenary of Shri Dharampal
ಮಾನ್ಯ ಪ್ರಧಾನ ಮಂತ್ರಿಯವರಲ್ಲೊಂದು ವಿನಂತಿ:
ಆಗಸ್ಟ್ 16, 2021
ಕೋವಿಡ್-19 ನಿಯಂತ್ರಣ ಹಾಗೂ ಚಿಕಿತ್ಸೆಯಲ್ಲಿ ಭಾರತೀಯ ವೈದ್ಯಕೀಯ ಪದ್ಧತಿಗಳ ಸಂಪೂರ್ಣ ಹಾಗೂ ಪರಿಣಾಮಕಾರಿ ಬಳಕೆಗೆ ಮನವಿ
ಕಳೆದೊಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ, ವಿಶ್ವವು ಕೋವಿಡ್-19 ಮಹಾಮಾರಿಯನ್ನು ಎದುರಿಸುತ್ತಿರುವ ಸಮಯದಲ್ಲಿ ಭಾರತೀಯ ವೈದ್ಯಕೀಯ ಪದ್ಧತಿಗಳನ್ನು, ವಿಶೇಷವಾಗಿ ಆಯುರ್ವೇದ, ಸಿದ್ಧ ಹಾಗೂ ಯುನಾನಿಯನ್ನು, ಭಾರತದಲ್ಲಿ ರೋಗ ನಿಯಂತ್ರಣ ಹಾಗೂ ಚಿಕಿತ್ಸೆಯಲ್ಲಿ ವ್ಯಾಪಕವಾಗಿ ಬಳಸಲಾಗಿದೆ. ಈ ದೇಶೀಯ ವೈದ್ಯಪದ್ಧತಿಗಳ ವ್ಯಾಪಕತೆ ಹಾಗೂ ಪರಿಣಾಮಕಾರಿತ್ವವನ್ನು ಕುರಿತು ಆಯುಷ್ ಸಚಿವಾಲಯ ಹಾಗೂ ಅದರ ಅಧೀನದ ಸಂಸ್ಥೆಗಳು ಸಂಗ್ರಹಿಸಿದ ದತ್ತಾಂಶಗಳಿಂದ ಸಂಪೂರ್ಣ ಹಾಗೂ ವಿವರಣಾತ್ಮಕ ಚಿತ್ರಣ ಲಭಿಸುತ್ತದೆ.
ಆಯುಷ್ ಸಚಿವಾಲಯದಿಂದ ಕೈಗೊಂಡ ಅನೇಕ ಉಪಕ್ರಮಗಳಲ್ಲಿ, ಮುಖ್ಯವಾಗಿ ಎರಡು ಉಪಕ್ರಮಗಳು ಗಮನೀಯವಾದವು [1].
1. ಅಖಿಲ ಭಾರತ ಆಯುರ್ವೇದ ಸಂಸ್ಥೆಯು(ಎ.ಐ.ಐ.ಎ.) "ಆಯುಷ್-ರಕ್ಷಾ" ಎಂಬ ಶೀರ್ಷಿಕೆಯಲ್ಲಿ 80,000 ದೆಹಲಿ ಪೊಲೀಸ್ ಸಿಬ್ಬಂದಿಯಮಧ್ಯ ಬೃಹತ್ ಪ್ರಮಾಣದ ಸಮೂಹ ಆರೋಗ್ಯ ಅಧ್ಯಯನವನ್ನು ಕೈಗೊಂಡಿದೆ. ಆಯುರ್ವೇದ ಔಷಧಗಳನ್ನು ಒಳಗೊಂಡ ಆಯುಷ್-ರಕ್ಷಾ ಕಿಟ್‌ಗಳನ್ನು ಮೂರು ಹಂತದಲ್ಲಿ ವಿತರಣೆ ಮಾಡಲಾಯಿತು ಹಾಗೂ ರೋಗ ತಡೆಗಟ್ಟುವಲ್ಲಿ ಆಯುರ್ವೇದ ಔಷಧಗಳ ಪರಿಣಾಮಕಾರಿತ್ವವನ್ನು ಅರಿಯಲು ದತ್ತಾಂಶಗಳ ವಿಶ್ಲೇಷಣೆ ಮಾಡಲಾಯಿತು. ದೆಹಲಿ ನಾಗರಿಕರ ಹೋಲಿಕೆಯಲ್ಲಿ, ದೆಹಲಿ ಪೊಲೀಸ್ ಸಿಬ್ಬಂದಿಯ ವಯೋಮಾನ ಆಧಾರದ ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆ ಆಯಿತು. ಜೂನ್ 15ರ ನಂತರದಲ್ಲಿ (ಔಷಧ ನೀಡಿದ ಸಮಯ) ದೆಹಲಿ ನಾಗರಿಕರಲ್ಲಿ ಸೋಂಕು ಹೆಚ್ಚಳವಾಗುತ್ತಲೇ ಸಾಗಿ ಗರಿಷ್ಠ ಪ್ರಮಾಣಕ್ಕೆ ಏರಿಕೆಯಾಗಿದ್ದರೆ, ದೆಹಲಿ ಪೊಲೀಸ್ ಸಿಬ್ಬಂದಿಯ ಕೋವಿಡ್-19 ಸೋಂಕಿಗೆ ಒಳಗಾಗುವಿಕೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಯಿತು. ಇತರೆ ರಾಜ್ಯಗಳ ಹೋಲಿಕೆಯಲ್ಲಿ, ದೆಹಲಿ ಪೊಲೀಸರು ಸೋಂಕಿಗೆ ಒಳಗಾಗಿರುವ ಪ್ರಮಾಣ ಕಡಿಮೆ ಇದೆ. ಅದಲ್ಲದೆ, ಇತರೆ ರಾಜ್ಯದ ಪೊಲೀಸರ ಹೋಲಿಕೆಯಲ್ಲಿ ದೆಹಲಿ ಪೊಲೀಸರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ ಸಂಖ್ಯೆಯೂ ಕಡಿಮೆಯೆಂದು ದಾಖಲಾಗಿದೆ.
2. ಕಳೆದ 11 ತಿಂಗಳಲ್ಲಿ ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಸಿ.ಎಚ್.ಸಿ. ವಾರ್ಡ್‌ನಲ್ಲಿ ದಾಖಲಾಗಿದ್ದಸುಮಾರು 600 ಸೋಂಕಿತರಲ್ಲಿ, ಶೇಕಡಾ 99.5 ರಷ್ಟು ಮಂದಿ ಸೋಂಕಿತರು ಸಂಪೂರ್ಣ ಸೋಂಕುರಹಿತರಾಗಿದ್ದಾರೆ (ರೆಫರಲ್ ದತ್ತಾಂಶ ಹೊರತುಪಡಿಸಿ).
ಸಾಮಾನ್ಯ ಜನರ ಅನುಕೂಲಕ್ಕಾಗಿ ಆಯುಷ್ ಸಚಿವಾಲಯ ಹಾಗೂ ಅನೇಕ ರಾಜ್ಯ ಸರ್ಕಾರಗಳೂ ದೇಶೀಯ ರೋಗನಿರೋಧಕ ಔಷಧಗಳು ಹಾಗೂ ಪದ್ಧತಿಗಳನ್ನು ಕ್ರಿಯಾಶೀಲವಾಗಿ ಉತ್ತೇಜಿಸಿವೆ. ಇಂತಹ ದೇಶೀಯ ರೋಗನಿರೋಧಕ ಕ್ರಮಗಳನ್ನು ಸಮಾಜದ ಎಲ್ಲ ಸ್ತರಗಳಲ್ಲೂ ಅಳವಡಿಸಿಕೊಳ್ಳಬಹುದು ಎನ್ನುವುದನ್ನು "ಆಯುಷ್ ಸಂಜೀವಿನಿ ಆಪ್" ಮೂಲಕ ದೊರೆತ ದತ್ತಾಂಶವು ಸೂಚ್ಯವಾಗಿ ತಿಳಿಸುತ್ತಿದೆ. ಬೃಹತ್ ಸಂಖ್ಯೆಯ ಭಾರತೀಯರು ತಮ್ಮ ಕುಟುಂಬ ಹಾಗೂ ಪ್ರದೇಶದಲ್ಲಿ ಬಳಕೆಯಲ್ಲಿರುವ ರೋಗನಿರೋಧಕ ದೇಶೀಯ ಅಥವಾ ನಾಟಿ ವೈದ್ಯ ಔಷಧಗಳನ್ನು ನಿರಂತರವಾಗಿ ಸೇವನೆ ಮಾಡಿದ ಅನುಭವ ಹೊಂದಿದ್ದಾರೆ. ಈ ಎಲ್ಲ ಅಂಶಗಳೂ, ಕನಿಷ್ಠ ಮೊದಲನೆ ಅಲೆಯ ಮಟ್ಟಿಗಾದರೂ, ಸೋಂಕಿನ ಹರಡುವಿಕೆಯನ್ನು ಹಾಗೂ ತೀವ್ರತೆಯನ್ನು ಕಡಿಮೆ ಮಾಡಿತು ಎನ್ನಬಹುದು.
ಭಾರತ ಸರ್ಕಾರ ಮತ್ತು ಕೆಲವು ರಾಜ್ಯ ಸರ್ಕಾರಗಳ ಮಟ್ಟದಲ್ಲಿ ನಡೆದ ಪ್ರಯತ್ನಗಳ ಜತೆಗೆ, ದೇಶೀಯ ಪದ್ಧತಿಗಳ ಹಲವಾರು ವೈದ್ಯರು ತಮ್ಮ ದೈನಂದಿನ ಚಿಕಿತ್ಸೆ ಭಾಗವಾಗಿಯೇ ಬೃಹತ್ ಸಂಖ್ಯೆಯ ಕೋವಿಡ್ ಸೋಂಕಿತರಿಗೂ ಚಿಕಿತ್ಸೆ ನೀಡಿದ್ದಾರೆ. ಅಂತಹ ಒಂದು ನಿರ್ದಿಷ್ಟ ಉದಾಹರಣೆಯೆಂದರೆ, ಚೆನ್ನೈನಗರದ ವೈದ್ಯರೊಬ್ಬರು, ಅನೇಕ ಗಂಭೀರ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳಿದ್ದವರೂ (ಕೋಮಾರ್ಬಿಡ್) ಸೇರಿ 600 ಸೋಂಕಿತರಿಗೆ ಚಿಕಿತ್ಸೆ ನೀಡಿದ್ದಾರೆ. ಇವರಲ್ಲಿ ಇಬ್ಬರು ಮಾತ್ರ ನಿಧನರಾಗಿದ್ದಾರೆ. ಇವರಲ್ಲಿ ಪ್ರಾರಂಭದ 167 ಸೋಂಕಿತರ ಕುರಿತು ವೈಜ್ಞಾನಿಕ ಹಾಗೂ ಸಾಂಖ್ಯಿಕ ಪದ್ಧತಿಯಲ್ಲಿ ದಾಖಲು ಮಾಡಿದ ವಿಸ್ತೃತ ಮಾಹಿತಿಯನ್ನು ಆಯುರ್ವೇದ ಮತ್ತು ಸಮಗ್ರ ವೈದ್ಯಪದ್ಧತಿಯ ಇತ್ತೀಚಿನ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ [2]. ಹಲವಾರು ಕಾರಣಗಳಿಂದ ಚಿಕಿತ್ಸೆಯಿಂದ ಹೊರನಡೆದ 21 ಸೋಂಕಿತರ ಮಾಹಿತಿಯನ್ನು ಈ ವರದಿಯಲ್ಲಿ ಸೇರ್ಪಡೆ ಮಾಡಲಾಗಿಲ್ಲ. ಚಿಕಿತ್ಸೆಯನ್ನು ಮುಂದುವರಿಸಿದ ಎಲ್ಲ 167 ಸೋಂಕಿತರೂ ಗುಣಮುಖರಾದರು. ಗಂಭೀರವಾದ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದು ಚಿಕಿತ್ಸೆ ಪಡೆದ ಸೋಂಕಿತರನ್ನು ಕುರಿತು ವಿಸ್ತೃತವಾದ ವರದಿ ಇದೇ ನಿಯತಕಾಲಿಕದ ಮತ್ತೊಂದು ಸಂಚಿಕೆಯಲ್ಲಿ ಪ್ರಕಟಿಸಲ್ಪಟ್ಟಿದೆ [3].
ಇಂತಹದ್ದೇ ಬೃಹತ್ ಪ್ರಮಾಣದ ಹಾಗೂ ಸಫಲ ಚಿಕಿತ್ಸೆಯ ಉದಾಹರಣೆಗಳು ಎಲ್ಲಾ ದೇಶೀಯ ಪದ್ಧತಿಗಳ ವೈದ್ಯಸಮುದಾಯದಲ್ಲೂ ಲಭ್ಯವಿವೆ. ತಮಿಳುನಾಡಿನಲ್ಲಿ 4,200 ಹಾಸಿಗೆ ಸಾಮರ್ಥ್ಯದ ಒಟ್ಟು 29 ಸಿದ್ಧ ಕೋವಿಡ್ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿದೆ, ಹಾಗೂ ಅವುಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ತಮಿಳುನಾಡಿನ ಪ್ರಖ್ಯಾತ ಸಿದ್ಧ ಚಿಕಿತ್ಸಕರೊಬ್ಬರು 870 ಸೋಂಕಿತರಿಗೆ ಚಿಕಿತ್ಸೆ ನೀಡಿದ್ದು, ಇವರಲ್ಲಿ ಒಬ್ಬರೂ ನಿಧನರಾಗಿಲ್ಲ, ಹಾಗೂ ಕೇವಲ ಐವರು ಚಿಕಿತ್ಸೆಯಿಂದ ಹೊರನಡೆದಿದ್ದಾರೆ. ಬೆಂಗಳೂರಿನ ಆಯುರ್ವೇದ ವೈದ್ಯರೊಬ್ಬರು, ಗಂಭೀರ ದೀರ್ಘಕಾಲೀನ ಸಮಸ್ಯೆಗಳನ್ನು ಹೊಂದಿದ್ದವರೂ ಸೇರಿ ತಾವು ಚಿಕಿತ್ಸೆ ನೀಡಿದ 400 ಸೋಂಕಿತರ ಮಾಹಿತಿಗಳನ್ನು ದಾಖಲು ಮಾಡಿದ್ದಾರೆ. ಮೀರತ್‌ನ ಆಧುನಿಕ ವೈದ್ಯಪದ್ಧತಿಯ ಆಸ್ಪತ್ರೆಯೊಂದು ಹಿರಿಯ ಆಯುರ್ವೇದ ವೈದ್ಯರ ಸಮಾಲೋಚನೆಯೊಂದಿಗೆ ತೀವ್ರಚಿಕಿತ್ಸೆಯ (ಇನ್ಟೆನ್ಸಿವ್ ಕೇರ್) ಘಟಕದಲ್ಲಿರುವವರಿಗೂ ಆಯುರ್ವೇದ ಹಾಗೂ ಆಧುನಿಕ ಪದ್ಧತಿಗಳನ್ನು ಒಳಗೊಂಡ ಸಮಗ್ರ ಚಿಕಿತ್ಸೆ ನೀಡುತ್ತಿದೆ. ಆಯುರ್ವೇದ ಚಿಕಿತ್ಸೆ ಪಡೆದವರಲ್ಲಿ ಗಣನೀಯವಾಗಿ ಉತ್ತಮ ಫಲಿತಾಂಶಗಳು ಲಭಿಸಿರುವುದನ್ನು ದಾಖಲು ಮಾಡಿರುವುದಾಗಿ ಆಸ್ಪತ್ರೆ ತಿಳಿಸಿದೆ.
ಇವುಗಳನ್ನು ಕುರಿತ, ಹಾಗೂ ದೇಶದ ವಿವಿಧಭಾಗಗಳಲ್ಲಿ ದೇಶೀಯ ಪದ್ಧತಿಯ ವೈದ್ಯರು ನಡೆಸಿದ ಇಂತಹದ್ದೇ ಹಲವಾರು ಪ್ರಯತ್ನಗಳ ಮಾಹಿತಿಯು ಆಯುಷ್ ಸಚಿವಾಲಯ ಹಾಗೂ ಕೆಲವು ರಾಜ್ಯ ಸರ್ಕಾರಗಳ ಬಳಿ ಲಭ್ಯವಿವೆ.
ಈ ಪ್ರಯೋಗಗಳು ಏಕಪಾರ್ಶ್ವೀಯ ("ಸಿಂಗಲ್ ಆರ್ಮ್ಡ್") ಆಗಿರುವ ಕಾರಣ ಕೋವಿಡ್ ಚಿಕಿತ್ಸೆಯಲ್ಲಿ ದೇಶೀಯ ವೈದ್ಯಪದ್ಧತಿಗಳ ಪರಿಣಾಮಕಾರಿತ್ವದ ಖಚಿತ ಸಾಕ್ಷಿಯನ್ನು ಒದಗಿಸುವುದಿಲ್ಲ ಹಾಗೂ ದೇಶೀಯ ಪದ್ಧತಿಯ ಚಿಕಿತ್ಸೆ ಪಡೆದವರ ಮತ್ತು ಪಡೆಯದವರ ನಡುವೆ ಸೂಕ್ತ ಹೋಲಿಕೆಯನ್ನು ನೀಡುವುದಿಲ್ಲ ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ ಕೋವಿಡ್ ಮಹಾಮಾರಿಯ ನಿಯಂತ್ರಣ ಹಾಗೂ ಚಿಕಿತ್ಸೆ ನೀಡುವಲ್ಲಿ ದೇಶೀಯ ವೈದ್ಯಪದ್ಧತಿಗಳ ಸುರಕ್ಷತೆ ಹಾಗೂ ಪರಿಣಾಮಕಾರಿತ್ವದ ಸಾಮರ್ಥ್ಯವನ್ನು ಈ ವರದಿಗಳು ಖಚಿತಪಡಿಸಿವೆ. ಈ ಪ್ರಯೋಗಗಳಿಂದ ಕೆಳಕಂಡ ಅಂಶಗಳು ಕಂಡುಬರುತ್ತವೆ:
1. ಸುರಕ್ಷತೆ: ಕೋವಿಡ್ ಸೋಂಕಿತರಿಗೆ ಬಳಕೆ ಮಾಡಲು ಭಾರತೀಯ ಪದ್ಧತಿಯ ಚಿಕಿತ್ಸೆ ಹಾಗೂ ವಿಧಾನಗಳು ಸುರಕ್ಷಿತವಾಗಿವೆ. ಚಿಕಿತ್ಸೆಯಲ್ಲಿ ಭಾಗವಹಿಸಿದ ಸಾವಿರಾರು ಜನರಲ್ಲಿ ಯಾರಿಗೂ ಈ ಚಿಕಿತ್ಸೆಯಿಂದಾಗಿ ಆರೋಗ್ಯ ಕ್ಷೀಣಿಸಿದ ವರದಿಯಾಗಿಲ್ಲ. ಏಕೆಂದರೆ, ಕೋವಿಡ್ ಸೋಂಕಿತರಲ್ಲಿ ಬಳಕೆ ಮಾಡಲಾದ ಔಷಧಗಳು ಭಾರತೀಯ ವೈದ್ಯಪದ್ಧತಿಗಳ ವಿಸ್ತೃತ ಔಷಧ ತಯಾರಿಕಾ ಸೂತ್ರದ ಆಧಾರದಲ್ಲಿ ಸಿದ್ಧಪಡಿಸಲಾಗಿದ್ದು, ಇವುಗಳು ಸುದೀರ್ಘ ಕಾಲದಿಂದ ಬಳಸಲ್ಪಡುತ್ತಿವೆ ಹಾಗೂ ಅವುಗಳ ಸುರಕ್ಷತೆ ಸುಸ್ಥಾಪಿತವಾಗಿದೆ.
2. ಸಂಭವನೀಯ ಪರಿಣಾಮಕಾರಿತ್ವ: ದೇಶೀಯ ರೋಗನಿರೋಧಕ ಚಿಕಿತ್ಸೆ ಸ್ವೀಕರಿಸಿದವರಲ್ಲಿ ಸೋಂಕು ಹಾಗೂ ಸಾವಿನ ಪ್ರಮಾಣ ಸಾಮಾನ್ಯದರಕ್ಕಿಂತ ಗಣನೀಯವಾಗಿ ಕಡಿಮೆಯೆಂದು ದಾಖಲಾಗಿದೆ. ಚಿಕಿತ್ಸೆಯನ್ನು ಮಧ್ಯದಲ್ಲಿ ಸ್ಥಗಿತಗೊಳಿಸಿದವರನ್ನು ಹೊರತುಪಡಿಸಿ, ದೇಶೀಯ ಚಿಕಿತ್ಸೆ ಪಡೆದವರಲ್ಲಿ ಕೊವಿಡ್ ಸೋಂಕಿನ ಅವಧಿ ಹಾಗೂ ಸಾವಿನ ಪ್ರಮಾಣವೂ ಕಡಿಮೆ ಇದೆ. ಈ ಮೇಲೆ ತಿಳಿಸಿದ ಚಿಕಿತ್ಸೆಗಳು ರೋಗ ಗುಣಪಡಿಸುವ ಖಚಿತ ದಾವೆಯನ್ನು ಮಾಡುವುದಿಲ್ಲವಾದರೂ, ದೇಶೀಯ ವೈದ್ಯಪದ್ಧತಿಗಳು ತೀವ್ರ ಪರಿಣಾಮಕಾರಿತ್ವ ಹೊಂದಿರುವುದರ ಸೂಚನೆಯನ್ನಂತೂ ನೀಡಿವೆ.
ಹೊಸದಾಗಿ ಉದ್ಭವಿಸಿರುವ ಈ ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದ ಸಮಯದಲ್ಲಿ, ತುರ್ತು ಬಳಕೆಗೆ ಔಷಧ ಅನುಮತಿ ನೀಡುವ ಮುನ್ನ ಕನಿಷ್ಠ ಪಕ್ಷ ಎರಡು ಪ್ರಮುಖ ಅವಶ್ಯಕತೆಗಳನ್ನು ಪರಿಗಣಿಸಬೇಕು; ಅವು ಸುರಕ್ಷತೆ ಹಾಗೂ ಸಂಭವನೀಯ ಪರಿಣಾಮಕಾರಿತ್ವ. ಮಹಾಮಾರಿಯ ವಿರುದ್ಧ ಬಳಕೆ ಮಾಡಲಾದ ಅನೇಕ ಆಧುನಿಕ ಚಿಕಿತ್ಸೆ ವಿಧಾನಗಳು ಇಷ್ಟು ಮಾತ್ರವೂ ಭರವಸೆಯನ್ನು ಮೂಡಿಸಲಿಲ್ಲ ಎಂಬುದನ್ನು ಈ ಸಂದರ್ಭದಲ್ಲಿ ಗಮನಿಸಬೇಕು.
ಔಷಧಗಳ ಸುರಕ್ಷತೆ ಹಾಗೂ ಸಂಭಾವ್ಯ ಪರಿಣಾಮಕಾರಿತ್ವವನ್ನು ಕುರಿತ ಆಯುಷ್ ಸಚಿವಾಲಯದಿಂದ ಅಧಿಕೃತವಾಗಿ ಸಂಗ್ರಹಿಸಲಾದ ದತ್ತಾಂಶದ ಪ್ರಮಾಣ ಹಾಗೂ ಅನೇಕ ಹಿರಿಯ ಆಯುರ್ವೇದ ಮತ್ತು ದೇಶೀಯ ವೈದ್ಯರ ಅನುಭವಗಳ ಆಧಾರದಲ್ಲಿ, ದೇಶೀಯ ವೈದ್ಯಪದ್ಧತಿಗಳಿಗೆ ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸಾತ್ಮಕ ಬಳಕೆಯಲ್ಲಿ ಅನುಮತಿ ನೀಡುವುದು ಅವಶ್ಯಕ. ಈ ಮೂಲಕ ಅಂತಹ ಚಿಕಿತ್ಸೆಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ವ್ಯಾಪಕವಾಗಿ ದೊರಕುವಂತಾಗಬೇಕು. ಹೀಗೆ ಮಾಡದಿರುವುದು, ಈಗಾಗಲೆ ಸುರಕ್ಷಿತ ಎಂದು ಸ್ಥಾಪಿತವಾಗಿರುವ ಮತ್ತು ಪರಿಣಾಮಕಾರಿತ್ವದ ಕುರಿತು ಭರವಸೆಯನ್ನು ಮೂಡಿಸಿರುವ ಲಭ್ಯ ಚಿಕಿತ್ಸೆಯಿಂದ ಸೋಂಕಿತರನ್ನು ವಂಚಿಸಿದಂತಾಗುತ್ತದೆ.
ಹಾಗಾಗಿ, ನಾವು ಮಾನ್ಯ ಪ್ರಧಾನಮಂತ್ರಿಯವರಲ್ಲಿ ಈ ಕೆಳಕಂಡಂತೆ ವಿನಂತಿಸುತ್ತೇವೆ:-
1. ರೋಗನಿರೋಧಕ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ದೇಶೀಯ ಔಷಧಗಳನ್ನು ಉಚಿತವಾಗಿ ಹಾಗೂ ಸುಲಭವಾಗಿ ಎಲ್ಲ ಸಾರ್ವಜನಿಕ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು, ಔಷಧಾಲಯಗಳು, ಮುಂತಾದೆಡೆ ಲಭಿಸುವಂತೆ ಮಾಡಬೇಕು. ಇವುಗಳನ್ನು ವಿವಿಧ ಮಾರ್ಗಗಳ ಮೂಲಕ ವ್ಯಾಪಕವಾಗಿ ಹಂಚಲೂ ವ್ಯವಸ್ಥೆಮಾಡಬೇಕು.
2. ಕೋವಿಡ್ ಚಿಕಿತ್ಸೆ ನೀಡುತ್ತಿರುವ ಎಲ್ಲ ಸರ್ಕಾರಿ ವ್ಯವಸ್ಥೆಗಳಲ್ಲಿ, ಕನಿಷ್ಠ ಪಕ್ಷ ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಾದರೂ, ಈಗಾಗಲೆ ನೀಡುತ್ತಿರುವ ಪ್ರಮಾಣಿತ ಆಧುನಿಕ ಚಿಕಿತ್ಸೆಯ ಜತೆಗೆ, ಭಾರತೀಯ ಪದ್ಧತಿಗಳ ನುರಿತ ವೈದ್ಯರ ಮಾರ್ಗದರ್ಶನದಲ್ಲಿ ಹೆಚ್ಚುವರಿಯಾಗಿ ದೇಶೀಯ ಚಿಕಿತ್ಸೆ ಪಡೆಯುವ ಆಯ್ಕೆಯನ್ನು ಸೋಂಕಿತರಿಗೆ ನೀಡಬೇಕು. ಈ ಚಿಕಿತ್ಸೆಯು ಆಯುಷ್ ಸಚಿವಾಲಯ ಈಗಾಗಲೆ ರೂಪಿಸಿರುವ ಚಿಕಿತ್ಸಾ ವಿಧಾನಕ್ಕೆ ಅನುಗುಣವಾಗಿರಲಿ. ಒಪ್ಪಿತ ಶಿಷ್ಟಾಚಾರಕ್ಕೆ ಅನುಗುಣವಾಗಿ ಅಂತಹ ಅವಶ್ಯಕ ಸಂಖ್ಯೆಯ ವೈದ್ಯರನ್ನು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ತೊಡಗಿಸಿಕೊಳ್ಳಬೇಕು.
3. ಶೇಕಡಾ 10ರಿಂದ ಶೇಕಡಾ 20ರಷ್ಟು ಆಯ್ದ ಅಥವಾ ಇಚ್ಛೆಯುಳ್ಳ ಸೋಂಕಿತರಿಗೆ ಕೇವಲ ದೇಶೀಯ ಚಿಕಿತ್ಸೆಯನ್ನೇ (ಸ್ಟಾಂಡ್ ಅಲೋನ್ ಟ್ರೀಟ್ಮೆಂಟ್) ನೀಡಬೇಕು. ಈಗಾಗಲೆ ನಿರ್ಧರಿಸಲಾಗಿರುವ ಮಾನದಂಡಗಳಿಗೆ ಅನುಗುಣವಾಗಿ ಅವಶ್ಯವಾದಲ್ಲಿ, ಅವರಿಗೆ ಪ್ರಮಾಣಿತ ಆಧುನಿಕ ಚಿಕಿತ್ಸೆಯನ್ನು ಲಭ್ಯವಾಗಿಸಲಾಗುತ್ತದೆ ಎಂಬ ಭರವಸೆಯನ್ನೂ ಆ ಸೋಂಕಿತರಿಗೆ ನೀಡಬೇಕು.
4. ಸೂಕ್ತ ಮೇಲ್ವಿಚಾರಣೆ ಹಾಗೂ ದತ್ತಾಂಶ ಸಂಗ್ರಹಣೆಗಾಗಿ, ಪ್ರತಿ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಅಗತ್ಯ ದತ್ತಾಂಶವನ್ನು ನೇರವಾಗಿ ಅಪ್‌ಲೋಡ್ ಮಾಡಲು ಅನುಕೂಲವಾಗುವಂತಹ ತಂತ್ರಾಂಶವನ್ನು ಆಯುಷ್ ಹಾಗೂ ಆರೋಗ್ಯ ಸಚಿವಾಲಯಗಳು ಜಂಟಿಯಾಗಿ ಅಭಿವೃದ್ಧಿಪಡಿಸಬಹುದು. ಇದು ಆರೋಗ್ಯ ಸೇವೆ ನೀಡಿಕೆಯಲ್ಲಿ ಡಿಜಿಟಲ್ ಮೂಲಸೌಕರ್ಯದ ಉನ್ನತೀಕರಣಕ್ಕೆ ಕಾರಣವಾಗುತ್ತದೆ, ಹಾಗೂ ಸಾಮಾನ್ಯ ಸಮಯದಲ್ಲೂ ಚಿಕಿತ್ಸೆಗೆ ಅತ್ಯಂತ ಉಪಯೋಗಕಾರಿಯಾಗುತ್ತದೆ.
ಈ ವ್ಯವಸ್ಥೆಗಳನ್ನು, ಈಗಾಗಲೇ ಚಾಲ್ತಿಯಲ್ಲಿರುವ ರಾಷ್ಟ್ರೀಯ ಆಯುಷ್ ಮಿಷನ್(ಎನ್.ಎ.ಎಂ.) ಭಾಗವಾಗಿಯೇ ಅನುಷ್ಠಾನಗೊಳಿಸಬಹುದು. ಈ ಮೂಲಕ ದೇಶಾದ್ಯಂತ ಕೋವಿಡ್ ಸೋಂಕಿತರು ಈಗಾಗಲೆ ಪಡೆಯುತ್ತಿರುವ ಆಧುನಿಕ ಚಿಕಿತ್ಸೆಯ ಜತೆಗೆ ಹೆಚ್ಚುವರಿಯಾಗಿ ದೇಶೀಯ ಪದ್ಧತಿಯ ಚಿಕಿತ್ಸೆಯ ಲಾಭವನ್ನು ಪಡೆಯಲು, ಹಾಗೂ ಕೆಲವರಾದರೂ ಪೂರ್ಣಪ್ರಮಾಣದಲ್ಲಿ ದೇಶೀಯ ಪದ್ಧತಿಯ ಚಿಕಿತ್ಸೆಯನ್ನು ಪಡೆಯುವ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮತ್ತು ಕೋವಿಡ್ ವಿರುದ್ಧ ನಡೆಯುತ್ತಿರುವ ಸಮರದಲ್ಲಿ, ಈಗಾಗಲೆ ದೇಶಾದ್ಯಂತ ಲಭ್ಯವಿರುವ ತರಬೇತಿ ಪಡೆದ ದೇಶೀಯ ವೈದ್ಯರನ್ನು ಬೃಹತ್ ಪ್ರಮಾಣದಲ್ಲಿ ನಿಯೋಜನೆ ಮಾಡಲು ಸಾಧ್ಯವಾಗುತ್ತದೆ. ನಮ್ಮ ದೇಶೀಯ ವೈದ್ಯರ ಹಾಗೂ ದೇಶೀಯ ವೈದ್ಯಕೀಯ ಸೇವೆಗಳ ಕೌಶಲ ಹಾಗೂ ಜ್ಞಾನವನ್ನು, ಮಹಾಮಾರಿ ವಿರುದ್ಧ ಸೆಣೆಸಬೇಕಾದ ತುರ್ತು ಪರಿಸ್ಥಿತಿಯ ವೇಳೆ ಈ ಮೂಲಕ ನಾವು ಬಳಕೆ ಮಾಡಿಕೊಂಡಾಗುತ್ತದೆ.
ಈ ಪ್ರಕ್ರಿಯೆ ಆರಂಭವಾದ ಕೆಲ ತಿಂಗಳುಗಳಲ್ಲಿಯೇ, ಕೋವಿಡ್ ನಿಯಂತ್ರಣದಲ್ಲಿ ಹಾಗೂ ಹೆಚ್ಚುವರಿಯಾದ ಮತ್ತು ಪೂರ್ಣಪ್ರಮಾಣದ ಕೋವಿಡ್ ಚಿಕಿತ್ಸೆಯಲ್ಲಿ ದೇಶೀಯ ಚಿಕಿತ್ಸೆಗಳ ಪರಿಣಾಮಕಾರಿತ್ವವನ್ನು ಕುರಿತ ವೈಜ್ಞಾನಿಕ ದತ್ತಾಂಶಗಳು ಲಭ್ಯವಾಗುತ್ತವೆ. ನಾವು ನಂಬಿರುವಂತೆ, ಈ ದತ್ತಾಂಶಗಳಿಂದಾಗಿ ದೇಶೀಯ ಚಿಕಿತ್ಸಾ ವಿಧಾನಗಳ ಪರಿಣಾಮಕಾರಿತ್ವವು ಖಚಿತವಾದಲ್ಲಿ, ದೇಶೀಯ ಆರೋಗ್ಯ ಚಿಕಿತ್ಸೆಯ ಘನತೆಯು ಭಾರತದಲ್ಲಿ ಹಾಗೂ ವಿಶ್ವದಲ್ಲಿಯೂ ಹೊಸ ಉಚ್ಚಸ್ತರಕ್ಕೆ ಏರಲಿದೆ.
ಈ ಪ್ರಕ್ರಿಯೆಗಳು ಆಧುನಿಕ ಹಾಗೂ ದೇಶೀಯ ಚಿಕಿತ್ಸಾ ವಿಧಾನಗಳನ್ನು ಪರಸ್ಪರ ಪೂರಕವಾದ ರೀತಿಯಲ್ಲಿ ಒಟ್ಟಾಗಿಸುತ್ತವೆ; ಹಾಗೂ ಭವಿಷ್ಯದಲ್ಲಿ ನಮ್ಮ ಆರೋಗ್ಯ ವ್ಯವಸ್ಥೆಯನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಹೊಸ ಸಾಧ್ಯತೆಗಳನ್ನು ಕಲ್ಪಿಸುತ್ತವೆ.
ಸಂಕಷ್ಟದ ಸಮಯದಲ್ಲೆ ಮಹತ್ತರ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಬೃಹತ್ ಪ್ರಮಾಣದಲ್ಲಿ ನಮ್ಮ ದೇಶೀಯ ವೈದ್ಯಕೀಯ ಪರಂಪರೆಯನ್ನು ಬಳಕೆ ಮಾಡುವ ಹಾಗೂ ಅವುಗಳ ಪರಿಣಾಮಕಾರಿತ್ವವನ್ನು ವೈಜ್ಞಾನಿಕವಾಗಿ ಮತ್ತು ಅಂಕಿ ಅಂಶಗಳ ಆಧಾರದಲ್ಲಿ ಸ್ಥಿರವಾಗಿ ಸ್ಥಾಪಿಸುವ ಮಹಾನ್ ಅವಕಾಶವನ್ನು ಈ ಮಹಾಮಾರಿಯು ಒದಗಿಸುತ್ತಿದೆ. ದೇಶೀಯ ಚಿಕಿತ್ಸಾ ವಿಧಾನವನ್ನು ನಾಡಿನ ವೈದ್ಯಕೀಯ ವ್ಯವಸ್ಥೆಯ ಮುಖ್ಯವಾಹಿನಿಗೆ ತರುವ ಹಾಗೂ ಅದರ ವೈಭವವನ್ನು ಜಗತ್ತಿನಲ್ಲಿ ಪ್ರತಿಷ್ಠಾಪಿಸುವ ಸಲುವಾಗಿ ದೊರಕಿರುವ ಈ ವಿರಳ ಅವಕಾಶವನ್ನು ನಾವು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಬೇಕು.
-
Nesari TM. Integration of Ayurveda in COVID-19 management: Need of an hour. J Ayurveda Case Rep [serial online] 2021 [cited 2021 Jul 5]; 4:1-2. Available from:
http://www.ayucare.org/text.asp?2021/4/1/1/318661 -
P.L.T. Girija, Nithya Sivan, Yamini Agalya Murugavel, Pallavi Naik, T.M. Mukundan, Monica Duraikannan, “Standalone Ayurvedic Intervention with Home Quarantine in COVID-19 - Outcomes of Clinical Practice”, Journal of Ayurveda and Integrative Medicine, 2021;04-15. Available from: https://doi.org/10.1016/j.jaim.2021.04.015
-
P.L.T. Girija, Nithya Sivan, Pallavi Naik, Yamini Agalya Murugavel, M. Ravindranath Thyyar, C.V. Krishnaswami, “Standalone Ayurvedic treatment of high-risk COVID-19 patients with multiple comorbidities: A case series”, Journal of Ayurveda and Integrative Medicine, 2021;06-06. Available at: https://doi.org/10.1016/j.jaim.2021.06.006